Sunday, October 5, 2014

ಕೆ.ಎಸ್.ನರಸಿಂಹಸ್ವಾಮಿಯವರ ’ಅಕ್ಕಿ ಆರಿಸುವಾಗ’ ಕವನಕ್ಕೆ ನನ್ನ ಕುಂಚ ಸ್ಪಂಧಿಸಿದ್ದು ಹೀಗೆ. ನಾನು ಮನುಷ್ಯರನ್ನು ಅಷ್ಟು ಚೆನ್ನಾಗಿ ಚಿತ್ರಿಸುತ್ತಿಲ್ಲ. ಆದರೂ ಇದೊಂದು ಪ್ರಯತ್ನ.

ಅಕ್ಕಿ ಆರಿಸುವಾಗ

ಅಕ್ಕಿಯಾರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು;
ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ
ಸಿಂಗಾರ ಕಾಣದ ಹೆರಳು;

ಹೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ
ಹದಿನಾರು ವರುಷದ ನೆರಳು;
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚುಹೊಳೆ, ಮುಂಗಾರಿನುರುಳು;

ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಜಲ್ಲೆನುವ ಬಳೆಯ ಸದ್ದು;
ಅತ್ತ ಯಾರೋ ಹೋದ ಇತ್ತ ಯಾರೋ ಬಂದ
ಕಡೆಗೆಲ್ಲ ಕಣ್ಣು ಬಿದ್ದು,

ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು.
ಬೇಸಿರಿಯ ಕಿರುಮುತ್ತು  ನುಚ್ಚಿನಲಿ ಮುಚ್ಚಿರಲು
ಹುಡುಕುತ್ತಿವೆ ಆ ಹತ್ತು ಬೆರಳು!

ಕೆ ಎಸ್. ನರಸಿಂಹಸ್ವಾಮಿ

No comments:

Post a Comment