ಸೃಷ್ಟಿಕರ್ತ
ಸದಾ ಉತ್ಸವ ಈ ಜಗದೊಳಗೆ
ಉತ್ತುವ ಬಿತ್ತುವ ಟಿಸಿಲೊಡೆಯುವ
ಮಾಗುವ ಸಂಭ್ರಮ ಪ್ರಕೃತಿಗೆ!
ಹಸಿರು ತೋರಣ, ಋತುಗಳ ಮೆರವಣಿಗೆ,
ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ
ಸೂರ್ಯನ ಬಿಸಿ, ಚಂದಿರನ ತಂಪು
ಹೇಗೆ ಸೃಷ್ಟಿಸಿದೆ ಇದನೆಲ್ಲ?
ಭಾವಗಳ ರಂಗು ಹೃದಯದ ಒಸರಲ್ಲಿ
ಹೊಂಬಣ್ಣದ ತೆನೆ ಹಸಿರಿನ ಬಸಿರಲ್ಲಿ
ಬಣ್ಣಗಳ ಮೇಳ ಧರಣಿಯ ಉಸಿರಲ್ಲಿ
ಧರಿತ್ರಿಗೆ ಕಿರೀಟ ಹಿಮಚ್ಚಾದಿತ ಪರ್ವತ ಶ್ರೇಣಿಗಳು
ಜೀವಚರಗಳಿಗೆ ಜೀವಸೆಲೆ ಜಲಪಾತ ಝರಿಗಳು
ಒಸರು ನದಿ ಕೆರೆ ಸರೋವರಗಳು
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?
ಭೂಮಿಯ ಜೊತೆಗೆ ಸಾಗರವನ್ನಿಟ್ಟೆ
ಕಂಬಗಳಿಲ್ಲದೆ ಬಾನಿನ ಚಪ್ಪರ ಹಾಕಿಯೇ ಬಿಟ್ಟೆ
ಪಶುಪಕ್ಷಿಪ್ರಾಣಿಗಳ ಆಡಲು ಬಿಟ್ಟೆ
ಭಾವಗಳ ರಂಗು ತುಂಬಿ ಮಾನವರ ಆಳಲು ಬಿಟ್ಟೆ
ಸಾಗರದೊಳಗೆ ಬಣ್ಣಬಣ್ಣದ ಜಲಚರಗಳ ತೇಲಿಸಿಬಿಟ್ಟೆ
ಪುಟ್ಟ ಪುಟ್ಟ ಚಿಟ್ಟೆಗಳ ಬಣ್ಣದಲದ್ದಿ ಹಾರಲು ಬಿಟ್ಟೆ
ಎಲ್ಲವೂ ನಿನ್ನಯ ಸೃಷ್ಟಿ- ಒಂದರಂತೆ ಇನ್ನೊಂದಿಲ್ಲ!
ಎಲ್ಲಿಂದ ತಂದೆ ಇಷ್ಟೊಂದು ವೈವಿಧ್ಯತೆ?
ಹಗಲಿನಾಗಸದಲಿ ನೇಸರ ಹೊಂಬಿಸಿಲು
ಇರುಳಿನಾಗಸದಲಿ ಶಶಿಯ ತಂಬೆಳಕು
ಅಂಬರದಲಿ ನಕ್ಷತ್ರಗಳ ಹೊಳಪು.
ಮರಗಳ ತುಂಬ ಮಿಂಚುಳ್ಳಿ ಮಿಣುಕು,
ಮೋಡಗಳ ನಡುವೆ ಮಿಂಚಿನ ಝಳಪು
ಬೆಳಕಿಗೆಂದೂ ಬರವಿಲ್ಲ.
ಆದರೂ ಮನಮನದೊಳಗೊಂದೊಂದು
ನಕ್ಷತ್ರವನ್ನಿಡಲು ಯಾಕೆ ಮರೆತೆ?
ಹೆಣ್ಣಿನ ಜೊತೆಗೆ ಗಂಡನ್ನಿಟ್ಟೆ
ಭಾವಗಳ ಓಟಕೆ ರಂಗನು ಎರೆದೆ
ಕಾಮದ ಬೆಂಕಿಯ ಉರಿಸಿ ಹೊಸ ಹುಟ್ಟಿಗೆ ಇಂಬನ್ನಿತ್ತೆ.
ಪ್ರೀತಿ ಪಾಠದ ಅಕ್ಕರಿಗ ನೀನು
ಪ್ರೀತಿಯೇ ಜಗದ ಉಸಿರೆಂದೆ
ಆದರೂ ಪ್ರೀತಿಯ ಜೊತೆಗೆ ದ್ವೇಷವನ್ನಿಟ್ಟೆ.
ಸುಖದ ಜೊತೆಗೆ ದುಃಖವನ್ನಿಟ್ಟೆ
ಯಾಕೆ ಹೀಗೆ ಮಾಡಿದೆ?
ಭೂಮಿಯ ಸಹನೆ, ಅಲೆಗಳ ಚಂಚಲತೆ
ಗಾಳಿಯ ಚೈತನ್ಯ, ಆಗಸದ ಐಕ್ಯತೆ
ಎಲ್ಲವೂ ಕಲಿಕೆಯ ಆಗರ. ಎಲ್ಲಕ್ಕೂ ನೀನೇ ಗುರು
ಎಲ್ಲರೂ ನಿನ್ನ ಕೈಯಲ್ಲಿ ಅಕ್ಷ,
ನೀ ಹೇಳಿದಂತೆ ಇಡೀ ಜಗ.
ಆದರೂ ಮುತ್ತಿದೆ ದ್ವೇಷದ ಹಗೆ, ನೋವಿನ ಧಗೆ
ಶಾಂತಿಯ ಏಕೆ ತುಟ್ಟಿಯಾಗಿಸಿದೆ?
ನಿನ್ನಯ ಬಣ್ಣದ ಬಾಂಡಲಿ ಅಕ್ಷಯ!
ರಾಗಕೆ ಮೌನವಿಲ್ಲ, ರಂಗಿಗೆ ಬರವಿಲ್ಲ
ನೀಬರೆವ ಚಿತ್ರಗಳಿಗೆ ಕೊನೆಯಿಲ್ಲ
ಇಡೀ ಬ್ರಹ್ಮಾಂಡವೇ ನಿನ್ನ ಕ್ಯಾನ್ವಾಸು
ಎಲ್ಲವೂ ಅಗಾಧ, ಅಕಲಂಕ, ಅಕೃತ್ರಿಮ
ಕಣ್ಣಿಗೆ ಕಾಣದ ಚಿತ್ರಿಕ ನೀನು
ನಿನ್ನೊಲವು ಅ ಕ್ಷೀಣ ನಿನ್ನ ಅಣತಿಗೆ ನಮ್ಮ ಸವಾಲಿಲ್ಲ.
ಎಲ್ಲವ ಹೊತ್ತ ಅಗಧರ ನೀನು ನಿನಗೆ ನೀನೇ ಸವಾಲು
ನೀನಂದಂತೆ ಜಗವೆಲ್ಲ.
ಎಲ್ಲಿರುವೆ ನೀನು ಹೇಗಿರುವೆ?
No comments:
Post a Comment